ಡಿಬೆಂಚರ್ -
ಒಂದು ಋಣಕ್ಕೆ, ಅಥವಾ ಒಂದು ಮೊಬಲಗನ್ನು ಕೇಳುವ ಅಥವಾ ಪಡೆಯುವ ಹಕ್ಕೆಗೆ ಸಾಕ್ಷ್ಯವಾಗಿ ನೀಡಲಾದ, ಸಾರ್ವಜನಿಕ ಅಧಿಕಾರಿಯೊಬ್ಬನಿಂದ ಸಹಿಯಾದ, ಲಿಖಿತಪತ್ರ; ಋಣ ಸ್ವೀಕೃತಿಯ ಲಿಖಿತಪತ್ರ, ಪ್ರಮಾಣಕ, ವೋಚರ್-ಎಂಬುದು ಡಿಬೆಂಚರ್ ಎಂಬ ಶಬ್ದದ ಸಾಮಾನ್ಯ ಅರ್ಥ. ಒಬ್ಬ ವ್ಯಕ್ತಿಗೆ ಸಲ್ಲತಕ್ಕದ್ದಾಗಿ ಪ್ರಮಾಣಿಸಿ ಸರ್ಕಾರಿ ಅಧಿಕಾರಿಯೊಬ್ಬ ನೀಡಿದ ವೋಚರನ್ನು ಡಿಬೆಂಚರ್ ಎಂದು ಕರೆಯುವುದುಂಟು. ಯುದ್ಧೋಪಕರಣ ಇಲಾಖೆಗೆ ಸರಬರಾಯಿ ಮಾಡಲಾದ ಸಾಮಗ್ರಿಗೆ ಪ್ರತಿಯಾಗಿ ಸಲ್ಲಬೇಕಾದ ಮೊಬಲಗನ್ನು ಸೂಚಿಸಿ ನೀಡಲಾದ ಪತ್ರ ಒಂದು ಉದಾಹರಣೆ. ಸೈನಿಕನಿಗೋ ನಾವಿಕನಿಗೋ ಪಾವತಿಯಾಗಬೇಕಾದ ಸಂಬಳದ ಬಾಕಿಗೆ ನೀಡದ ಪತ್ರವನ್ನು ಇಂಗ್ಲೆಂಡಿನಲ್ಲಿ ಡಿಬೆಂಚರ್ ಎನ್ನುವುದುಂಟು. ಆಮದಾದ ಸರಕನ್ನು ದೇಶದಲ್ಲಿ ಬಳಸಿಕೊಳ್ಳದೆ ಅದನ್ನು ರಫ್ತು ಮಾಡಿದಾಗ, ಅದರ ರಫ್ತುದಾರ ಆ ಸರಕನ್ನು ಆಮದು ಮಾಡಿಕೊಳ್ಳುವ ಸಮಯದಲ್ಲಿ ನೀಡಿದ ಸುಂಕದ ಮೊಬಲಗನ್ನು ಹಿಂದೆ ಪಡೆಯಲು ಸಮ್ಮತಿ ನೀಡಿ ಸುಂಕದ ಅಧಿಕಾರಿಗಳು ನೀಡಿದ ಪ್ರಮಾಣಪತ್ರಕ್ಕೂ ಡಿಬೆಂಚರ್ ಎಂಬ ಹೆಸರಿದೆ. ಸ್ವದೇಶದಲ್ಲಿ ತಯಾರಾದ ಸರಕಿಗೆ ಸರ್ಕಾರ ಪ್ರೋತ್ಸಾಹದ್ರವ್ಯವನ್ನೇನಾದರೂ (ಬೌಂಟಿ) ಕೊಡುವುದಿದ್ದಲ್ಲಿ, ಹಾಗೆ ಕೊಡಬೇಕಾದ ಮೊಬಲಗಿನ ಪ್ರಮಾಣಪತ್ರವನ್ನು ಕೂಡ ಡಿಬೆಂಚರ್ ಎನ್ನುತ್ತಾರೆ. ಕಂಪನಿ, ಪಾರ್ಪೊರೇಷನ್ (ನಿಗಮ) ಮುಂತಾದ ಸಂಸ್ಥೆಗಳು ತಾವು ಪಾವತಿ ಮಾಡಬೇಕಾದ ಋಣಕ್ಕೆ ಸಾಕ್ಷ್ಯವಾಗಿ ನೀಡುವ ಸಂಲೇಖಗಳನ್ನು (ಇನ್ಸ್ಟ್ರುಮೆಂಟ್) ಡಿಬೆಂಚರ್‍ಗಳೆಂದು, ಡಿಬೆಂಚರ್ ಬಾಂಡ್‍ಗಳೆಂದು ಕರೆಯುವುದು ಭಾರತದಲ್ಲೂ ಬ್ರಿಟನಿನಲ್ಲೂ ಹೆಚ್ಚು ರೂಢಿಯಲ್ಲಿದೆ. ಸಾಮಾನ್ಯವಾಗಿ ಇವನ್ನು ಸಂಬಂಧಪಟ್ಟ ಸಂಸ್ಥೆಯ ಮೊಹರಿನೊಂದಿಗೆ ನೀಡಲಾಗುತ್ತದೆ. ಇದಕ್ಕೆ ಸಂಸ್ಥೆಯ ಸಕ್ಷಮ (ಕಾಂಪಿಟೆಂಟ್) ಅಧಿಕಾರಿಯ ಸಹಿ ಇರುತ್ತದೆ. 

	ಕಂಪನಿಗಳು ಷೇರುಗಳ ಮೇಲೆ ಪಡೆದ ಬಂಡವಾಳ ಸಾಲದೆ ಹೋದಾಗ ಅದನ್ನು ಹೆಚ್ಚಿಸಿಕೊಳ್ಳಲು ಸಾಮಾನ್ಯವಾಗಿ ಮೂರು ಮಾರ್ಗಗಳುಂಟು. ಕಂಪನಿಯ ಅಧಿಕೃತ ಬಂಡವಾಳದ ಗರಿಷ್ಠ ಮಿತಿಯನ್ನು ಮೀರದಂತೆ ಷೇರು ಬಂಡವಾಳವನ್ನು ಅದು ಹೆಚ್ಚಿಸಿಕೊಳ್ಳಬಹುದು. ಸಾರ್ವಜನಿಕರಿಗೆ ಇನ್ನಷ್ಟು ಷೇರುಗಳನ್ನು ನೀಡಿ ಅವರಿಂದ ಹಣ ಪಡೆದುಕೊಳ್ಳಬಹುದು. ಆದರೆ ಈಗೆ ಹೆಚ್ಚಿಸಲಾದ ಬಂಡವಾಳವನ್ನು ಮತ್ತೆ ಕಡಿಮೆ ಮಾಡಲು ಸಾಮಾನ್ಯವಾಗಿ ಸಾಧ್ಯವಾಗುವುದಿಲ್ಲ. ಅಲ್ಲದೆ ಮುಂದೆ ಕಂಪನಿಗೆ ಅಷ್ಟೊಂದು ಬಂಡವಾಳ ಅಗತ್ಯವಿರದೆ ಹೋಗಬಹುದು. ಆದರೂ ಆಗಲೂ ಅದರ ಮೇಲೆ ಷೇರುದಾರರಿಗೆ ಲಾಭಾಂಶ (ಡಿವಿಡೆಂಟ್) ಪಾವತಿ ಮಾಡಬೇಕಾಗಬಹುದು. ಇದರಿಂದ ಒಟ್ಟಿನಲ್ಲಿ ಷೇರುಗಳ ಮೇುಲೆ ಲಾಭಾಂಶದರ ಕಡಿಮೆಯಾಗುತ್ತದೆ. ಬ್ಯಾಂಕುಗಳಿಂದಲೊ ಇತರ ಮೂಲಗಳಿಂದಲೋ ಸಾಲ ಪಡೆಯುವುದು ಇನ್ನೊಂದು ಮಾರ್ಗ. ಕಂಪನಿಗೆ ಅಗತ್ಯವಾದ ಬಂಡವಾಳ ತಕ್ಕಮಟ್ಟಿಗೆ ಹೆಚ್ಚಿನದಾಗಿದ್ದರೆ, ದೀರ್ಘಕಾಲಿಕವಾದ್ದಾಗಿದ್ದರೆ, ಆಗ ಅದು ಸಾಮಾನ್ಯವಾಗಿ ಡಿಬೆಂಚ್ ಬಾಂಡುಗಳನ್ನು ಸಾರ್ವಜನಿಕರಿಗೆ ನೀಡುವುದರ ಮೂಲಕ ಹಣವನ್ನು ಪಡೆದುಕೊಳ್ಳುತ್ತದೆ. ಹೀಗೆ ಪಡೆದ ಹಣವನ್ನು ಕಂಪನಿಯ ಸಾಲವೆತ್ತಿ ಬಂಡವಾಳ (ಬಾರೋಡ್ ಕ್ಯಾಪಿಟಲ್) ಎಂದು ಪರಿಗಣಿಸುವುದುಂಟು. 

	ಡಿಬೆಂಚರ್ ನೀಡಿಕೆಯ ಮೂಲಕ ಕಂಪನಿ ಪಡೆಯಬಯಸುವ ಮೊಬಲಗು ಎಷ್ಟೆಂಬುದನ್ನು ನಿರ್ಧರಿಸಿ, ಅದನ್ನು ಷೇರುಗಳಂತೆಯೇ ಒಂದು ನಿಶ್ಚಿತ ಸಂಖ್ಯೆಯ ನಿಶ್ಚಿತ ಮೊಬಲಗಿನ ಸಮಭಾಗಗಳನ್ನಾಗಿ ಮಾಡಿ ಸಾರ್ವಜನಿಕರಿಗೆ ನೀಡಲಾಗುತ್ತದೆ. ಈ ಸಮಭಾಗಗಳು ಡಿಬೆಂಚರುಗಳು. ಡಿಬೆಂಚರುಗಳನ್ನು ಪಡೆದವರಿಗೆ ನೀಡಲಾಗುವ ಋಣಪತ್ರಗಳಾದ ಡಿಬೆಂಚರ್ ಬಾಂಡುಗಳಲ್ಲಿ ಅವುಗಳ ನೀಡಿಕೆಗೆ ಸಂಬಂಧಿಸಿದ ಷರತ್ತುಗಳನ್ನೂ ವಿಧಿಗಳನ್ನೂ (ಸಾಮಾನ್ಯವಾಗಿ ಅವುಗಳ ಹಿಂಬದಿಯಲ್ಲಿ) ನಮೂದಿಸಲಾಗಿರುತ್ತದೆ. 

ಡಿಬೆಂಚರುಗಳ ಮುಖ್ಯ ಲಕ್ಷಣಗಳು ಇವು : 1. ಡಿಬೆಂಚರು ಕಂಪನಿಯ ಸಾಲ ಪತ್ರ. ಡಿಬೆಂಚರುದಾರ ಕಂಪನಿಯ ಒಡೆಯನಲ್ಲ, ಸಾಲಿಗ, ಲೇಣೆದಾರ (ಕ್ರೆಡಿಟರ್). 2 ಕಂಪನಿ ಲಾಭ ಗಳಿಸಲಿ, ಬಿಡಲಿ, ಅದು ಕೊಡುವುದಾಗಿ ಒಪ್ಪಿಕೊಂಡ ದರದಲ್ಲಿ ಡಿಬೆಂಚರುಗಳ ಮೊಬಲಗಿನ ಮೇಲೆ ಡಿಬೆಂಚರುದಾರನಿಗೆ ಡಿಬೆಂಚರಿನ ಜೀವಾವಧಿಯಲ್ಲಿ ಬಡ್ಡಿ ಸಲ್ಲಿಸಬೇಕು. 3 ಡಿಬೆಂಚರುಗಳ ನೀಡಿಕೆಯ ವಿಧಿಗಳಲ್ಲಿ ನಮೂದಿಸಿರುವಂತೆ ನಿಶ್ಚಿತವಾದ ಅವಧಿಯಲ್ಲಿ (ಅವು ಅಮೋಚ್ಯ ಡಿಬೆಂಚರುಗಳಾಗಿರುವಾಗ ವಿನಾ) ಅವುಗಳ ಮೊಬಲಗನ್ನು ಕಂಪನಿ ಹಿಂದಿರುಗಿಸಬೇಕು. 4 ಕಂಪನಿ ಅವಸಾಯನಗೊಂಡಾಗ ಡಿಬೆಂಚರುಗಳ ಮೊಬಲಗನ್ನು ಅಂದಿನವರೆಗೂ ಕೂಡಿ ಬಂದ ಬಡ್ಡಿಯೊಂದಿಗೆ ಪಾವತಿ ಮಾಡಬೇಕು. ಒಂದು ವೇಳೆ ಕಂಪನಿಯ ಆಸ್ತಿಗಳ ಮೊಬಲಗು ಅದರ ಒಟ್ಟು ಲೇಣೆದಾರರಿಗೆ ಸಲ್ಲಬೇಕಾದ ಮೊಬಲಗಿಗಿಂತ ಕಡಿಮೆಯಿದ್ದರೆ ಇತರ ಲೇಣೆದಾರರಂತೆ ಡಿಬೆಂಚರುದಾರರೂ ತಮಗೆ ಸಲ್ಲಬೇಕಾದ ಬಾಕಿಯನ್ನು ದಾಮಾಷಾ ಮೇರೆಗೆ ಪಡೆಯುತ್ತಾರೆ. ಕಂಪನಿಯ ಯಾವ ಆಸ್ತಿಯಾದರೂ ಡಿಬೆಂಚರುಗಳಿಗೆ ಆಧಾರವಾಗಿದ್ದರೆ ಅದನ್ನು ಡಿಬೆಂಚರಿನ ಮೋಚನೆಗಾಗಿ ಬಳಸಬೇಕಾಗುತ್ತದೆ. 

	ಡಿಬೆಂಚರುಗಳ ನೀಡಿಕೆಯ ಷರತ್ತು ಮತ್ತು ವಿಧಿಗಳಿಗೆ ಅನುಗುಣವಾಗಿ ಡಿಬೆಂಚರುಗಳಲ್ಲಿ ಹಲವು ಬಗೆಗಳುಂಟು. ಪಡೆದ ಋಣಕ್ಕೆ ಪ್ರತಿಯಾಗಿ ಕಂಪನಿ ಯಾವುದಾದರೂ ಆಧಾರ ನೀಡಿದ್ದರೆ ಅಂಥ ಡಿಬೆಂಚರುಗಳ ಆಧಾರಿತ (ಮಾರ್ಟ್‍ಗೇಜ್) ಅಥವಾ ಪ್ರತಿಭೂತಿಯುತ (ಸೆಕ್ಯೂರ್ಡ್) ಡಿಬೆಂಚರುಗಳೆನಿಸಿಕೊಳ್ಳುತ್ತವೆ. ಆಧಾರರಹಿತವಾದಂಥವು ಪ್ರತಿಭೂತಿರಹಿತ, ಅನಾಧಾರಿತ (ಅನ್‍ಸೆಕ್ಯೂರ್ಡ್), ನಗ್ನ (ನೇಕೆಡ್) ಅಥವಾ ಸರಳ (ಸಿಂಪಲ್) ಡಿಬೆಂಚರುಗಳು. ಆಧಾರಿತ ಡಿಬೆಂಚರುಗಳಿಗೆ ಕಂಪನಿಯ ಯಾವುದಾದರೂ ನಿಗದಿಯಾದ (ಸ್ಥಿರ) ಆಧಾರವನ್ನೋ, ಚಲ (ಪ್ಲೋಟಿಂಗ್) ಆಧಾರವನ್ನೋ (ಉದಾ: ವ್ಯಾಪಾರ ಸರಕು) ನೀಡಿರಬಹುದು. 

	ಡಿಬೆಂಚರುಗಳನ್ನು ಪಡೆದಿರುವವವರ ಹೆಸರು, ವಿಳಾಸ ಮುಂತಾದ ವಿವರಗಳನ್ನು ಕಂಪನಿಯ ಪುಸ್ತಕದಲ್ಲಿ ದಾಖಲು ಮಾಡಿಕೊಂಡಿದ್ದರೆ ಅವು ನೋಂದಾಯಿತ (ರಿಜಿಸ್ಟರ್ಡ್) ಡಿಬೆಂಚರುಗಳು. ಇವನ್ನು ಡಿಬೆಂಚರುದಾರು ಕ್ರಮವಾಗಿ ಪತ್ರದ ಮೂಲಕವೇ ಇತರರಿಗೆ ವರ್ಗಮಾಡುವುದು ಸಾಧ್ಯ. ಕಂಪನಿಯ ಪುಸ್ತಕಗಳಲ್ಲಿ ಈ ವರ್ಗಾವಣೆಗಳು ದಾಖಲಾಗುವುದು ಅಗತ್ಯ. ಡಿಬೆಂಚರುದಾರರ ಹೆಸರು, ವಿಳಾಸ ಮುಂತಾದವನ್ನು ಪುಸ್ತಕಗಳಲ್ಲಿ ದಾಖಲು ಮಾಡಿಕೊಳ್ಳದೆಯೇ ನೀಡಲಾಂಥವು ವಾಹಕ (ಬೇರರ್) ಡಿಬೆಂಚರುಗಳು. ಇವನ್ನು ಹೊಂದಿರುವವರೇ (ವಾಹಕ) ಇವುಗಳ ಹಕ್ಕುದಾರರು. ಇವುಗಳ ವರ್ಗಾವಣೆಗಳು ಕಂಪನಿಯ ಪುಸ್ತಕಗಳಲ್ಲಿ ದಾಖಲಾಗಬೇಕಾದ್ದಿಲ್ಲ. ಇಂಥ ಡಿಬೆಂಚರುಗಳ ಬಾಂಡುಗಳಿಗೆ ಲಗತ್ತಾದ ಕೂಪನುಗಳನ್ನು ಡಿಬೆಂಚರುದಾರರು ಕಂಪನಿಗೆ ಒಪ್ಪಿಸಿ ಅದರಿಂದ ಬಡ್ಡಿ ಪಡೆಯಬಹುದು. 

	ಸಾಮಾನ್ಯವಾಗಿ ಡಿಬೆಂಚರುಗಳ ಮೊಬಲಗನ್ನು ನಿಗದಿಯಾದ ದಿನದಂದು ಡಿಬೆಂಚರುದಾರರಿಗೆ ಹಿಂದಿರುಗಿಸಬೇಕು; ಅಥವಾ ನಿಗದಿಯಾದ ಅವಧಿಯಲ್ಲಿ (ಕಂಪನಿ ಜೀವಂತವಾಗಿರುವ ಕಾಲದಲ್ಲಿ) ಕಂತುಗಳಾಗಿ ಪಾವತಿ ಮಾಡಬೆಕು. ಪಾವತಿ ಮಾಡಬೇಕಾದ ಡಿಬೆಂಚುಗಳು ಮೋಚ್ಯ (ರೆಡೀಮಬಲ್) ಡಿಬೆಂಚರುಗಳು. ಪಾವತಿಯ ದಿನಾಂಕವನ್ನೂ ವಿಧಾನವನ್ನೂ ಡಿಬೆಂಚರ್ ಬಾಂಡುಗಳಲ್ಲಿ ನಮೂದಿಸಲಾಗುತ್ತದೆ. ಹಣದ ಪಾವತಿಗೆ ಯಾವ ಅವಧಿಯನ್ನೂ ನಿಗದಿ ಮಾಡದಿದ್ದರೆ ಅವು ಅಮೋಚ್ಯ (ಇರ್ರೆಡೀಮಬಲ್) ಡಿಬೆಂಚರುಗಳು. ಕಂಪನಿ ಯಾವಾಗ ಬೇಕಾದರೂ ಇವುಗಳ ಹಣವನ್ನು ಹಿಂದಿರುಗಿಸಬಹುದು. ಕಂಪನಿ ಸುಸೂತ್ರವಾಗಿ ಸಾಗುತ್ತಿದ್ದರೆ, ಡಿಬೆಂಚರುದಾರರಿಗೆ ನಿಗದಿಯಾದ ದರದಲ್ಲಿ ಕ್ರಮವಾಗಿ ಬಡ್ಡಿ ಪಾವತಿಯಾಗುತ್ತಿದ್ದರೆ ಅವರು ತಮ್ಮ ಹಣವನ್ನು ವಾಪಸು ಕೇಳುವಂತಿಲ್ಲ. ಆದರೆ ಡಿಬೆಂಚರು ಮೋಚ್ಯವಾಗಿಯೇ ಇರಲಿ, ಅಮೋಚ್ಯವಾಗಿಯೇ ಇರಲಿ, ಕಂಪನಿ ಅವಸಾನಗೊಂಡಾಗ ಡಿಬೆಂಚರುದಾರನಿಗೆ ಡಿಬೆಂಚರಿನ ಹಣ ದೇಯವಾಗುತ್ತದೆ.
(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ